ತರಲಿಕ ನಿಯಂತ್ರಣ -
ಕೇವಲ ತರಲ ಬಲ ಹಾಗೂ ಚಲನೆಯನ್ನು ಉಪಯೋಗಿಸಿ ಪ್ರಕ್ರಿಯಾ ವ್ಯತ್ಯಯಗಳ (ಪ್ರೋಸೆಸ್ ವೇರಿಯಬಲ್ಸ್) ಮೂಲ್ಯವನ್ನು ಅನುಕ್ರಮವಾಗಿ ಗ್ರಹಿಸಿ, ವ್ಯಕ್ತಪಡಿಸಿ, ನಿಯಂತ್ರಿಸುವ ವ್ಯವಸ್ಥೆ (ಫ್ಲೂಯ್ಡಿಕ್ ಕಂಟ್ರೋಲ್). ಸಂಸ್ಕರಣೆಗಳು ನಡೆಯುತ್ತಿರುವಾಗ (ಭೌತ, ರಾಸಾಯನಕ ವೈದ್ಯುತ, ಔಷ್ಣಿಕ ಅಥವಾ ಯಾಂತ್ರಿಕ-ಯಾವುದೇ ಇರಲಿ) ಪ್ರಕ್ರಿಯೆಗೆ ಸಂಬಂಧಿಸಿದ ಹಲವು ಪರಿಮಾಣಗಳ ಮೌಲ್ಯಗಳು ವ್ಯತ್ಯಾಸಗೊಳ್ಳುತ್ತಿರುತ್ತವೆ. ಸಂಸ್ಕರಣ ವಸ್ತುವಿನ ಉಷ್ಣತೆ, ಸಾಂದ್ರತೆ, ಸ್ನಿಗ್ಧತೆ, ರಾಸಾಯನಿಕ ಸಂಯೋಗ, ಪರಿಚಲನದರ, ಯಾಂತ್ರಿಕ ವೇಗ, ಬಲ ಹಾಗೂ ಸಾಮಥ್ರ್ಯಗಳು, ಒತ್ತಡಗಳು ಹಾಗೂ ವಿದ್ಯುತ್ ವೋಲ್ಟೇಜ್, ಆವೃತ್ತಿ—ಇವು ಹಲವು ಪ್ರಕ್ರಿಯಾ ವ್ಯತ್ಯಸ್ತ ಪರಿಮಾಣಗಳು. ಈ ಬದಲಾವಣೆಗಳು ನಿಯೋಜಿತವಾಗಿ ಹಾಗೂ ಕ್ರಮಬದ್ಧವಾಗಿ ಇರಬೇಕಾದುದು ಸಂಸ್ಕರಣೆ ಸಮರ್ಪಕವಾಗಿ ನೆರವೇರಲು ಅತ್ಯಗತ್ಯ. ಆದ್ದರಿಂದ ಪ್ರಕ್ರಿಯಾ ವ್ಯತ್ಯಯಗಳನ್ನು ಕಾಲಕಾಲಕ್ಕೆ ಗ್ರಹಿಸಿ ವ್ಯಕ್ತಪಡಿಸುವುದಲ್ಲದೇ ಮೌಲ್ಯಗಳನ್ನು ನಿಯಂತ್ರಣ ಮಾಡಲು ಸ್ವಚಲಿತ ವ್ಯವಸ್ಥೆಯನ್ನು ಅಳವಡಿಸಿರುತ್ತಾರೆ. ಇದು ಉಪಕರಣ ಮತ್ತು ನಿಯಂತ್ರಣ ವ್ಯವಸ್ಥೆ. ಈ ವ್ಯವಸ್ಥೆ ಕಾರ್ಯ ಮಾಡಲು ಬೇಕಾದ ಶಕ್ತಿಯನ್ನು ವಿದ್ಯುತ್ ಅಥವಾ ಎಲೆಕ್ಟ್ರಾನಿಕ್ಸ್ ಅಥವಾ ಯಾಂತ್ರಿಕ ಅಥವಾ ತರಲಿಕ ಮೂಲದಿಂದ ಪಡೆಯುತ್ತಾರೆ. ತರಲ ಬಲವನ್ನು ಉಪಯೋಗಿಸಿ ಕಾರ್ಯ ನಿರ್ವಹಿಸುವ ವ್ಯವಸ್ಥೆಯೇ ತರಲಿಕ ನಿಯಂತ್ರಣ ವ್ಯವಸ್ಥೆ. ತರಲಿಕ ವ್ಯವಸ್ಥೆ ಎರಡು ತರಲಧಾರೆಗಳ ನಡುವಣ ಪರಸ್ಪರ ಅವಲಂಬನೆಯ ಕಾರ್ಯ ಚಟುವಟಿಕೆಯಿಂದಾಗಿ ಕೆಲಸ ಮಾಡುತ್ತದೆ. ಅಂದರೆ ಅಧಿಕ ಸಾಮಥ್ರ್ಯದ ತರಲಧಾರೆಯನ್ನು ಅಲ್ಪ ಸಾಮಥ್ರ್ಯದ ಧಾರೆಯಿಂದ ನಿಯಂತ್ರಿಸುವುದು ಈ ವ್ಯವಸ್ಥೆಯ ಮೂಲತತ್ತ್ವ. ತರಲಿಕ ನಿಯಂತ್ರಣ ತತ್ತ್ವವನ್ನು ಆಧರಿಸಿ ಹಲವು ಮಾದರಿಯ ಪ್ರವರ್ಧಕಗಳು (ಆಂಪ್ಲಿಫೈಯರ್ಸ್), ಅಂದೋಲಕಗಳು (ಆಸಿಲೇಟರ್ಸ್), ನಿಯಂತ್ರಕ ಕವಾಟಗಳು ಹಾಗೂ ಪರಿಚಲನ ಮಾಪನಗಳು ರಚನೆಯಾಗಿದೆ.

ಈ ವ್ಯವಸ್ಥೆಯ ಕೆಲ ವಿಶೇಷಗಳು ಈ ರೀತಿ ಇವೆ : 1 ವ್ಯವಸ್ಥೆಯಲ್ಲಿ ಇಂಥದೇ ತರಲವನ್ನು ಬಳಸಬೇಕೆಂಬ ನಿಯಮವಿಲ್ಲ. ಸಣ್ಣ ಕೊಳವೆಗಳಲ್ಲಿ ಹರಿಯಬಲ್ಲ ಯಾವ ದ್ರವ ಅಥವಾ ಅನಿಲವನ್ನಾದರೂ ಉಪಯೋಗಿಸಬಹುದು. 2 ನಿಯಂತ್ರಕ ಉಪಕರಣಗಳನ್ನು ತಯಾರಿಸಲು ಯಾವ ಲೋಹ ಅಥವಾ ಪಿಂಗಾಣಿಯನ್ನಾದರೂ ಆಯಬಹುದು. 3 ಅತ್ಯಧಿಕ ಪ್ರವರ್ಧನ ಶಕ್ತಿ, ಅಂದರೆ ನಿಯಂತ್ರಿಸಲು ಬೇಕಾಗುವ ಶಕ್ತಿಯಲ್ಲಿ ಉಳಿತಾಯ. ಉದಾಹರಣೆ 4" ವ್ಯಾಸದ ಕೊಳವೆಯಲ್ಲಿ ಹರಿಯುತ್ತಿರುವ ದ್ರವವನ್ನು ನಿಯಂತ್ರಿಸಲು ಕೇವಲ 1/8 ವ್ಯಾಸದ ರಂಧ್ರದ ಮೂಲಕ ಹರಿಯುತ್ತಿರುವ ತರಲಕ್ಕೆ ಸಾಧ್ಯವಾಗುತ್ತದೆ. 4 ಉಪಕರಣಗಳ ಗಾತ್ರ ಹಾಗೂ ಕಾರ್ಯಸಾಮಥ್ರ್ಯಕ್ಕೆ ಮಿತಿ ಇರುವುದಿಲ್ಲ. ಅಂದರೆ ನಿಯಂತ್ರಕ ಎಷ್ಟು ಬೇಕಾದರೂ ಸಾಮಥ್ರ್ಯಯುತವಾಗಿರಬಹುದು ಅಥವಾ ಅಲ್ಪ ಸಾಮಥ್ರ್ಯಯುತವೂ ಆಗಿರಬಹುದು. ಉದಾಹರಣೆಗೆ ಕೆಲವು ನಿಯಂತ್ರಕಗಳಲ್ಲಿನ ತರಲ ಚಲನೆಯ ಹಾದಿ 0.01 ಇಂಚಿನಷ್ಟು ಸಣ್ಣ ವ್ಯಾಸದ್ದಿರುತ್ತದೆ. 5 ತಕ್ಕ ಲೋಹ ಅಥವಾ ಪಿಂಗಾಣಿಯಿಂದ ತಯಾರಿಸಲ್ಪಟ್ಟ ನಿಯಂತ್ರಕಗಳು ಹೆಚ್ಚು ಉಷ್ಣತೆ, ಉಷ್ಣ ತೀಕ್ಷ್ಣತೆ ಮತ್ತು ಆಂದೋಲಕ ಸ್ಥಿತಿಗಳಲ್ಲೂ ಸಮರ್ಪಕವಾಗಿ ವತ್ರ್ತಿಸುತ್ತವೆ. 6 ನಿಯಂತ್ರಕಗಳು ಯಾವ ವಿಧವಾದ ಚರ ಭಾಗವನ್ನೂ ಪಡೆದಿಲ್ಲದಿರುವುದರಿಂದ ಯಾಂತ್ರಿಕ ಅಡಚಣೆಗಳು ಕಡಿಮೆ, ತರಲಿಕ ನಿಯಂತ್ರಕಗಳಲ್ಲಿ ಎರಡು ಮುಖ್ಯ ಕೊರತೆಗಳಿವೆ : (i) ನಿಯಂತ್ರಕಗಳ ಕಾರ್ಯನಿರ್ವಹಣೆ ಅವುಗಳ ವಿನ್ಯಾಸವನ್ನು ಸೂಕ್ಷ್ಮವಾಗಿ ಅವಲಂಬಿಸಿರುವುದರಿಂದ ನಿಯಂತ್ರಕದಲ್ಲಿ ಸ್ವಲ್ಪ ಕಸ, ಕೆಸರು ಇತ್ಯಾದಿ ಶೇಖರವಾದರೂ ಅವು ಸಮರ್ಪಕವಾಗಿ ವರ್ತಿಸುವುದಿಲ್ಲ. (ii) ಎಲೆಕ್ಟ್ರಾನಿಕ್ ಸಂಜ್ಞೆಗಳಷ್ಟು ತರಲಿಕ ಸಂಜ್ಞೆಗಳು ಕ್ಷಿಪ್ರವಾಗಿ ಕೆಲಸ ಮಾಡುವುದಿಲ್ಲ. ಅಂತಾಗಿ ಕಾರ್ಯದಕ್ಷತೆ ಸ್ವಲ್ಪಮಟ್ಟಿಗೆ ಕಡಿಮೆ.
ಕ್ಷೀಣವಾದ ಆದರೆ ಕ್ರಮಬದ್ಧವಾಗಿ ವ್ಯತ್ಯಯ ಹೊಂದುವ ಸಂಜ್ಞೆಗಳನ್ನು ಪಡೆದು ಆ ಸಂಜ್ಞೆಗಳಿಗೆ ಅನುಗುಣವಾದ ಅಧಿಕ ಸಾಮಥ್ರ್ಯದ ಸಂಜ್ಞೆಗಳನ್ನು ಸೃಷ್ಟಿಸಬಲ್ಲ ಉಪಕರಣ ಪ್ರವರ್ಧಕ, ತರಲಿಕ ಪ್ರವರ್ಧಕಗಳು ತರಲಿಕ ಚಲನಶಕ್ತಿಯನ್ನು ಉಪಯೋಗಿಸಿ ಕೆಲಸ ಮಾಡುತ್ತವೆ. ಮೇಲೆ ಹೇಳಿದಂತೆ ಈ ಉಪಕರಣಗಳ ಪ್ರವರ್ಧನ ಗುಣಾಂಕ ಬೇರೆ ರೀತಿಯ ಪ್ರವರ್ಧಕಗಳಿಗಿಂತ ಹೆಚ್ಚು. ತರಲಿಕ ಆಂದೋಲಕಗಳನ್ನು ನಿಯಂತ್ರಣ ವ್ಯವಸ್ಥೆಯ ವಿದ್ಯುನ್ಮಂಡಲಗಳಲ್ಲಿ ಸ್ವಿಚ್ ಸಾಧನಗಳಿಗಾಗಿ ಬಳಸುತ್ತಾರೆ. ಇವು ಹತ್ತು ಸಾವಿರ ಹಟ್ರ್ಸ್‍ಗಿಂತಲೂ ಹೆಚ್ಚಿನ ಆವೃತ್ತಿಯ ಕಂಪನಗಳನ್ನು ಸೃಷ್ಟಿಸಬಲ್ಲವಾಗಿವೆ.

ಬೇಡಿಕೆಗೆ ಅನುಗುಣವಾಗಿ ಸಂಸ್ಕರಣ ದ್ರವದ ಪರಿಚಲನ ದರವನ್ನು ನಿಯಂತ್ರಿಸಲು, ಸಾಕಷ್ಟು ಮಾತ್ರ ತೆರೆದಿರುವ ಅಥವಾ ಮುಚ್ಚಿರುವ ಕವಾಟಗಳಿಗೆ ನಿಯಂತ್ರಕ ಕವಾಟಗಳೆಂದು ಹೆಸರು. ತರಲಿಕ ಕವಾಟಗಳಲ್ಲಿ ಈ ನಿಯಂತ್ರಣಕ್ಕೆ ಒಳಪಡುವ ತರಲಧಾರೆಯ ಸ್ವಲ್ಪ ಭಾಗವನ್ನು ಅಥವಾ ಬೇರೊಂದು ತರಲದ ಕ್ಷೀಣಧಾರೆಯನ್ನು ಬಳಸುತ್ತಾರೆ. ಈ ಕವಾಟಗಳ ಉಪಯೋಗ ವಿಶೇಷವಾಗಿ (i) ಸಂಸ್ಕರಣೆಯಲ್ಲಿದ್ದು ಹರಿಯುತ್ತಿರುವುದಲ್ಲದೇ ಸತತವಾಗಿ ಕದಡಲ್ಪಡಬೇಕಾಗಿರುವ ದ್ರವಗಳ ನಿಯಂತ್ರಣದಲ್ಲಿ ಹಾಗೂ (2) ಉಷ್ಣ ವಿನಿಮಯ ಸಾಧನಗಳಲ್ಲಿ ಬಿಸಿ ಮಾಡುವ ಅಥವಾ ತಂಪು ಮಾಡುವ ದ್ರವದ ದರ ನಿಯಂತ್ರಿಸಲು ಬರುತ್ತದೆ.

ತರಲ ಪರಿಚಲನ ಮಾಪಕಗಳು ತರಲ ಆಂದೋಲಕಗಳನ್ನು ಉಪಯೋಗಿಸಿ ಕೆಲಸಮಾಡುತ್ತವೆ. ಈ ಮಾಪಕಗಳಲ್ಲಿ ವ್ಯಕ್ತಪಡುವ ಮಾಪನ ಏಕ ಪರಿಮಾಣಾತ್ಮಕವಾಗಿದ್ದು, ಚಲನದರಕ್ಕೆ ಅನುಗುಣವಾಗಿರುವುದಲ್ಲದೆ, ವಾತಾವರಣದ ಕಂಪನಗಳು ಇತ್ಯಾದಿಗಳಿಂದ ಬಾಧಿತವಾಗುವುದಿಲ್ಲ.
(ಎ.ಆರ್.ಎ.)
ಪರಿಷ್ಕರಣೆ:
ಹೆಚ್.ಆರ್.ಆರ್.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ